ಫೇಬರ್, ಜೀನ್ ಹೆನ್ರಿ
1823-1915. ಫಾನ್ಸಿನ ಕೀಟವಿಜ್ಞಾನಿ. 1823 ಸೆಪ್ಟಂಬರ್ 22ರಂದು ಫ್ರಾನ್ಸಿನ ದಕ್ಷಿಣ ಭಾಗದ ಸೇಂಟ್ ಲಿಯಾನ್ ಎಂಬಲ್ಲಿ ಜನನ. ಬಡತನದ ದೆಸೆಯಿಂದಾಗಿ ಅಜ್ಜನ ಆಶ್ರಯದಲ್ಲಿ ಬೆಳೆಯಬೇಕಾಯಿತು. ಸೇಂಟ್ ಲಿಯಾನ್, ರೋಡೆಸ್, ಟೊಲೂಸ್, ಅವಿನಾನ್, ಕಾರ್ಸಿಕ ಮುಂತಾದ ಸ್ಥಳಗಳಲ್ಲಿ ವಿದ್ಯಾಭ್ಯಾಸ. ಭೌತರಸಾಯನ, ಗಣಿತ ಮತ್ತು ಪ್ರಕೃತಿ ವಿಜ್ಞಾನಗಳಲ್ಲಿ ಅಪಾರ ಪಾಂಡಿತ್ಯ ಪಡೆದಿದ್ದ. ಕೀಟವಿಜ್ಞಾನದಲ್ಲಿ ವಿಶೇಷ ಆಸಕ್ತಿ, ಕಣಜ, ಬುವಾಡಿ (ಸಗಣಿಹುಳು), ಜೇಡ, ಪತಂಗ, ಒಂಟೆಹುಳು, ಮಿಡತೆ, ವಾಡೆಹುಳು, ಚಿಮ್ಮಂಡೆ, ಕಂಬಳಿಹುಳು ಮುಂತಾದ ಕೀಟಗಳ ಜೀವನ ವಿಧಾನಗಳನ್ನು ವೈಜ್ಞಾನಿಕವಾಗಿ ಅಭ್ಯಸಿಸಿ ಅನೇಕ ವಿದ್ವತ್ಪೂರ್ಣ ಲೇಖನಗಳನ್ನು ಬರೆದು ಪ್ರಕಟಿಸಿ ಹೆಸರುಗಳಿಸಿದ. ಇವನ ಕೃತಿಗಳ ಪೈಕಿ ಮುಖ್ಯವಾದವು: ಸೋಷಿಯಲ್ ಲೈಫ್ ಇನ್ ದಿ ವಲ್ರ್ಡ್ ಆಫ್ ಇನ್ಸೆಕ್ಟ್ಸ್ (ಕೀಟಪ್ರಪಂಚದಲ್ಲಿ ಸಾಮಾಜಿಕ ಜೀವನ), ಮಾರ್ವೆಲ್ಸ್ಸ್ ಆಫ್ ದಿ ಇನ್ಸೆಕ್ಟವಲ್ರ್ಡ್ (ಕೀಟಪ್ರಪಂಚದ ವಿಸ್ಮಯಗಳು), ಸೊವನೀರ್ ಎಂಟೊಮಾಲಜಿಕ್ಸ್ (ಎರಡು ಸಂಪುಟಗಳು). ಫೇಬರನ ಜೀವಿತದ ಕೊನೆಯ ದಿನಗಳು ಆಶಾದಾಯಕವಾಗಿರಲಿಲ್ಲ. ಬಡತನದ ದೆಸೆಯಿಂದಾಗಿ ಕುಗ್ಗಿಹೋಗಿದ್ದ. ಆದರೂ ಜೀವನದ ದುರ್ದೆಶೆಗಳನ್ನು ಗಣನೆಗೆ ತಂದುಕೊಳ್ಳದೆ ಕೀಟ ಪ್ರಪಂಚದಲ್ಲಿ ಮುಳುಗಿರುತ್ತಿದ್ದ. ಅವನ ಮನೆ ಕೀಟಗಳ ಉಗ್ರಾಣ. ಕೀಟಜೀವನದಲ್ಲಿಯ ರಸಮಯ ಸನ್ನಿವೇಶ, ನೋವು, ನಲಿವು, ಆಸೆ, ನಿರಾಸೆ, ಮೈತ್ರಿ, ಪ್ರೇಮಜೀವನ ಮುಂತಾದವನ್ನು ಕುರಿತು ಸುಮಾರು 218 ಲೇಖನಗಳನ್ನು ಬರೆದಿದ್ದಾನೆ. ಜೀವನದ ಕೊನೆಯ ಹದಿನೆಂಟು ವರ್ಷಗಳ ಕಾಲ ಸೆರಿನಾನ್ ಎಂಬ ಹಳ್ಳಿಯಲ್ಲಿ ನಡೆಸಿದ ಸಂಶೋಧನೆಗಳು ಅವನಿಗೆ ಕೀರ್ತಿ ತಂದಿದ್ದುವು. 1915 ಅಕ್ಟೋಬರ್ 11ರಂದು ನಿಧನ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ